ಕಾಮಲೇಖನ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಪ್ರಣಯಚೇಷ್ಟೆ ಮತ್ತು ಕಾಮಕೇಳಿಯನ್ನು ವರ್ಣಿಸುವ ಸಾಹಿತ್ಯ, ನಿಜವಾಗಿ ಅದು ಆ ಹೆಸರಿಗೆ ತಕ್ಕುದಾಗಬೇಕಾದರೆ ಓದಿದವರನ್ನು ಶಾರೀರಕ ಪ್ರಲೋಭನೆಗೆ ಎಳೆಯುವ ಶಕ್ತಿ ಅದಕ್ಕಿರಬೇಕು. ಅಲ್ಲದೆ ಅನೀತಿಯ ಕಡೆಗೆ ಅವರನ್ನು ಸೆಳೆಯುವಂತಿರಬೇಕು. ಅತಿನಿಷ್ಠೆಯುಳ್ಳವರು ಕಾಮ ಎಂಬ ಶಬ್ದವನ್ನು ಉಚ್ಚರಿಸುವುದಕ್ಕೂ ನಾಚಿಕೆಕೊಂಡು. ಅದನ್ನು ತೃತೀಯ ಪುರುಷಾರ್ಥ ಎನ್ನುವುದು ವಾಡಿಕೆ. ಇಂದ್ರಿಯ ತೃಪ್ತಿಯ ಸಂಗತಿ ಎಲ್ಲರಿಗೂ ಗೊತ್ತು. ಸಭ್ಯರಾರೂ ಅದನ್ನು ಬಹಿರಂಗವಾಗಿ ಪ್ರಸ್ತಾಪಿಸುವುದಿಲ್ಲ. ಅದೊಂದು ಗೋಪ್ಯವಾಗಿರತಕ್ಕ ವಿಚಾರವೆಂದೇ ಎಲ್ಲ ನಾಗರಿಕ ಜನರ ಅಲಿಖಿತ ಒಪ್ಪಂದ. ಅದನ್ನು ಪ್ರಕಟವಾಗಿಯೋ ಆಸಕ್ತಿಯಿಂದಲೋ ನಿರೂಪಿಸ ಹೊರಟರೆ ಅಂಥ ಮಾತುಕಥೆ ಕಾಮಾಲಾಪವಾಗುತ್ತದೆ, ಬರೆವಣಿಗೆ ಕಾಮಲೇಖನವಾಗುತ್ತದೆ. ಪ್ರಾಚೀನ ಗ್ರೀಕರ ಹಾಗೂ ಪ್ರಾಚೀನ ರೋಮನರ ಹಲವು ನಾಟುನುಡಿಗಳೂ ಕೆಲವು ಚಿಕ್ಕ ಕವನಗಳೂ ಆ ಬಗೆಯ ಖಂಡನೀಯವಾದ ಸಾಹಿತ್ಯವೆಂದೇ ಶತಮಾನಗಳಿಂದ ಎಣಿಸಲ್ಪಟ್ಟಿವೆ. ಮಾರ್ಷಲನ ಕೆಲವು ಚೌಪದಿಗಳನ್ನು ಎಲ್ಲರಿಗೂ ತಿಳಿಯುವ ದೇಶೀಯ ಭಾಷೆಯಲ್ಲಿ ಅಚ್ಚು ಮಾಡದೆ ಅವರಾರಿಗೂ ಅರಿವಿಲ್ಲದ ಮೂಲ ಲ್ಯಾಟಿನ್ನಿನಲ್ಲೇ ಅಚ್ಚುಹಾಕುವ ಸಂಪ್ರದಾಯ ಇತ್ತೀಚಿನವರೆಗೂ ಇತ್ತು. ನಾಟುನುಡಿಗಳನ್ನು ಓದುವದಕ್ಕಿಂತ ಕಣ್ಮರೆಯಾಗಿ ಹೋಗುವುದು ಶ್ರೇಯಸ್ಸು ಎಂದು ಸದಾಚಾರಶೀಲನಾದ ಶ್ರೀಮಂತ ಚೆಸ್ಟರ್ ಫೀಲ್ಡ್ ತನ್ನ ಮಗನಿಗೆ ಹೇಳಿದನಂತೆ. 19ನೆಯ ಶತಮಾನದಿಂದ ಈಚೆಗೆ ಸಮಾಜಗಳು ಬದಲಾವಣೆಗೊಂಡು ಹಿಂದಿನ ಸಂಭಾವ್ಯತೆಯ ಬಿಗಿಮುಷ್ಟಿಯಿಂದ ಸಡಿಲಗೊಂಡಿವೆ. ಸ್ತ್ರೀ ಪುರುಷರ ಸಂಪರ್ಕವಿಚಾರ ಹೆಚ್ಚು ಹೆಚ್ಚು ಸಹಜವೂ ಕುಭಾವನಾ ರಹಿತವೂ ಆಗುತ್ತಿದೆ. ಆದರೂ ಲೈಂಗಿಕ ವಿಚಾರವಾಗಿ ಹಳೆಯ ನಿಷೇಧ ಇದ್ದೇ ಇದೆ. 'ಗಂಡು ಗಂಡಸರ ಮಾತು' ಎಂಬ ಬಳಕೆಯ ನುಡಿ ಅದಕ್ಕೆ ಸಾಕ್ಷಿ.

 ಹೊಸ ಹುಟ್ಟಿನ ನಾಟಕಗಳಲ್ಲೂ ಸಂಸ್ಕøತ ಕನ್ನಡ ಚಂಪೂಕಾವ್ಯಗಳಲ್ಲೂ ಸುರತ ವ್ಯಾಪಾರಕ್ಕೆ ಸಂಬಂಧಿಸಿದ ವಾಕ್ಯಗಳು ಪರಿಚ್ಛೇಧಗಳೂ ಮೀಸಲಾಗಿವೆ. ಅವನ್ನು ಕಾಮಲೇಖನ ಎನ್ನುವವರಿದ್ದಾರೆ. ಹಾಗೆನ್ನುವುದು ನ್ಯಾಯವಲ್ಲ. ಹೊಸಹುಟ್ಟಿನ ಕಾಲದಲ್ಲಿ ಕುಲೀನರ ಪರಸ್ಪರ ಸಂಭಾಷಣೆಯಲ್ಲಿ ಈಗ ನಮಗೆ ಹೆಚ್ಚೆಂದು ತೋರುವಷ್ಟು ಸ್ವಾತಂತ್ರ್ಯ ಕಾಣಬರುತ್ತಿತ್ತು. ಆದರಿಂದ ಯಾರಿಗೂ ಜುಗುಪ್ಸೆ ಉಂಟಾಗುತ್ತಿರಲಿಲ್ಲ. ನಾಟಕಗಳಲ್ಲಿ ಅದೇ ಸ್ವಾತಂತ್ರ್ಯ ತೋರಿಬಂದುದರಲ್ಲಿ ಆಶ್ಚರ್ಯವಿಲ್ಲ. ಚಂಪೂಕಾವ್ಯಕ್ಕೆ 18 ವರ್ಣನೆಗಳು ಬಂದೇ ಬರಬೇಕೆಂದು ಕಡ್ಡಾಯವಾಗಿತ್ತು. ಆದ್ದರಿಂದ ಸತಿಪತಿಯರ ಏಕಾಂತವನ್ನೂ ವೇಶ್ಯಾವಾಟಿಯನ್ನೂ ಕವಿಗಳು ಬಣ್ಣಿಸಿದರು. ವಿಷಯವನ್ನು ಅಲಂಕಾರಯುಕ್ತವಾಗಿಯೂ ರಸವತ್ತಾಗಿಯೂ ಕವನಗೈಯುವುದೇ ಅವರ ಉದ್ದೇಶ. ಲೈಂಗಿಕ ಪ್ರಚೋದನೆ ಅವರ ಸಂಕಲ್ಪದಿಂದ ಬಲು ದೂರ.

 ಪುರಾತನ ಪ್ರಭು ಒಬ್ಬ ಕಾಮಕಾನ್ಯಗಳನ್ನು ಕಟ್ಟಲೋಸುಗವೇ ಒಂದು ಕವಿ ತಂಡವನ್ನು ಸಾಕಿ ಸಲಹುತ್ತಿದ್ದರಂತೆ. 19ನೆಯ ಶತಮಾನದ ಎರಡನೆಯ ಭಾಗದಲ್ಲಿ ಇಂಗ್ಲೆಂಡಿನಲ್ಲಿ ಫ್ರೆಂಚ್ ಕಾದಂಬರಿಗಳು ಎಂದರೆ ಅಂಥ ಕೆಟ್ಟದಾರಿಗೆ ಎಳೆಯುವ ಕಥೆಗಳೇ ಎಂಬ ಅರ್ಥವಿತ್ತು. ಹಿಂದಣ ಸಾಹಿತಿಗಳಲ್ಲಿ ಬೊಕಾಚೀಯೋವಿಗೆ ಉತ್ಕøಷ್ಟ ಕಥೆಗಾರನೆಂಬ ಕೀರ್ತಿ ಸಂದಿತಾದರೂ ಲಾಂಪಟ್ಯದ ಕವಿಯೆಂಬ ಅಪಖ್ಯಾತಿ ತಪ್ಪಲಿಲ್ಲ. ಈಚಿನವರಲ್ಲಿ ಮೋಪಾಸನ ಹೆಸರನ್ನು ಈ ಗುಂಪಿಗೆ ಸೇರಿಸಬಹುದು.

 ಕವಿತೆ, ಕಥೆ, ಕಾದಂಬರಿಗಳು ಹಾಗಿರಲಿ, ಈಚೆಗೆ ಕಾಮವ್ಯಾಪಾರವನ್ನು ವಿಶದವಾಗಿ ವಿವರಿಸಿ ವ್ಯಾಖ್ಯಾನ ಮಾಡುವ ಹೊತ್ತಗೆಗಳು ಹೆಚ್ಚುತ್ತಿವೆ. ಶಾಸ್ತ್ರವೆಂಬ ಹೆಸರಿನಲ್ಲಿ ಅವಕ್ಕೆ ಪರವಾನೆ ದೊರೆಯುತ್ತಿದೆ. ಆಗೊಂದು ಈಗೊಂದು ಪುಸ್ತಕವನ್ನು ಅಶ್ಲೀಲವೆಂದು ಮುಟ್ಟುಗೋಲು ಹಾಕುವುದೂ ಉಂಟು.

 ಈ ವಿಚಾರದಲ್ಲಿ ಬಿಡಿ ವ್ಯಕ್ತಿಯ ಶೀಲಧರ್ಮ, ಇಡೀ ಸಮಾಜದ ಕಟ್ಟುನಿಟ್ಟು ಕಡೆಯ ಮಾತು. ಸಾಹಿತ್ಯದಲ್ಲಿ ಶೀಲ, ಅಶ್ಲೀಲ ಎಂಬ ಮಾತಿಗೆ ಬಹು ಎಚ್ಚರಿಕೆಯಿಂದ ವ್ಯಾಖ್ಯಾನ ಮಾಡಬೇಕಾಗುತ್ತದೆ. ಸಾಹಿತ್ಯ ಓದುಗರಲ್ಲಿ ಉಂಟುಮಾಡುವ ಪರಿಣಾಮದಿಂದ ಅದನ್ನು ಶೀಲ ಅಥವಾ ಅಶ್ಲೀಲ ಎಂದು ಗುರುತಿಸುವುದೊಳ್ಳೆಯದು. ಪರಿಣಾಮಕ್ಕೆ ಸಾಹಿತ್ಯ ಹೇಗೆ ಕಾರಣವೋ ಹಾಗೆ ಓದುಗರ ಸಂಸ್ಕøತಿಯೂ ಕಾರಣವೆಂಬ ಮಾತನ್ನು ಮರೆಯಲಾಗದು. (ನೋಡಿ- ಅಶ್ಲೀಲ)   

 (ಎಸ್.ವಿ.ಆರ್.)